ಮಾಗಳಿ ಬೇರು ಆಸ್‍ಕ್ಲಿಪಿಯಡೇಸೀ ಕುಟುಂಬಕ್ಕೆ ಸೇರಿದ ವನ್ಯಸಸ್ಯ. ಮಾಕಳಿ ಬೇರು ಪರ್ಯಾಯ ನಾಮ. ಇದರ ಶಾಸ್ತ್ರೀಯ ನಾಮ ಡೆಕಾಲೆಪಿಸ್ ಹ್ಯಾಮಿಲ್‍ಟೋನಿಯೈ. == ವಿವರಗಳು == ದಕ್ಷಿಣ ಭಾರತದಲ್ಲೆಲ್ಲ ವ್ಯಾಪಕವಾಗಿ ಬೆಳೆಯುವ ಇದು ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಬಲು ಸಾಮಾನ್ಯ. ಇದು ಬಳ್ಳಿಯಂತೆ ಹಬ್ಬುವ ಪೊದೆ; ಜಂಟಿಜಂಟಿಯಾಗಿರುವಂತೆ ತೋರುವ ಕಾಂಡವನ್ನೂ ಉದ್ದದ್ದ ಅಂಡಾಕಾರದ ಎಲೆಗಳನ್ನೂ ಪಡೆದಿದೆ. ಈ ಗಿಡದ ಪ್ರಧಾನ ಹಾಗೂ ಉಪಯುಕ್ತ ಅಂಗವೆನಿಸಿರುವ ಬೇರು ಉರುಳಿಯಾಕಾರದ್ದು ಮಾಂಸಲವಾದ್ದು. ಇದಕ್ಕೆ ಸೊಗದೆ ಬೇರಿಗಿರುವಂಥ ಸಿಹಿರುಚಿಯೂ ತೀವ್ರತೆರನ ಸುವಾಸನೆಯೂ ಇವೆ. ಇದಕ್ಕೆ ಕಾರಣ ಬೇರಿನಲ್ಲಿರುವ 4-0-ಮೀಥೈಲ್-ರೆಸಾರ್ಸೈಲ್ ಆಲ್ಡಿಹೈಡ್ ಎಂಬ ರಾಸಾಯನಿಕ. == ಉಪಯೋಗಗಳು == ಬೇರಿಗೆ ಬ್ಯಾಕ್ಟೀರಿಯ ನಾಶಕ ಗುಣವೂ ಮೀನು ಮುಂತಾದವುಗಳನ್ನು ಕೊಲ್ಲುವ ಗುಣವೂ ಇವೆ. ಇದರಿಂದಾಗಿ ಮಾಗಳೀ ಬೇರನ್ನು ದೀರ್ಘಕಾಲ ಸಂಗ್ರಹಿಸಿಡಬಹುದು. ಸೂಕ್ಷ್ಮಜೀವಿಗಳಾಗಲಿ ಕೀಟಗಳಾಗಲಿ ಇದಕ್ಕೆ ತಗಲುವುದಿಲ್ಲ. ಈ ರಾಸಾಯನಿಕವನ್ನು ಆವಿಆಸವೀಕರಣದಿಂದ ಬೇರ್ಪಡಿಸಿ, ಆಹಾರ ಸಂರಕ್ಷಣೆಯಲ್ಲಿ ಬಳಸಬಹುದಾಗಿದೆ. ಮಾಗಳೀ ಬೇರು ಹಸಿವುಕಾರಕವೆಂದೂ ರಕ್ತಶುದ್ಧಿಕಾರಕವೆಂದೂ ಹೆಸರಾಗಿದೆ. ನಿಂಬೆ, ಮಾವು ಮುಂತಾದವುಗಳೊಂದಿಗೆ ಸೇರಿಸಿ ಇಲ್ಲವೆ ಇದನ್ನು ನೇರವಾಗಿ ಉಪ್ಪಿನಕಾಯಿ ಹಾಕುವುದಿದೆ. ಇದರ ಬೇರನ್ನು ನನ್ನಾರಿ ಬೇರಿಗೆ (ಸೊಗದೇಬೇರು) ಬದಲಾಗಿ, ಕಲಬೆರಕೆ ಮಾಡಿ ಬಳಸುವುದೂ ಉಂಟು. == ಉಲ್ಲೇಖಗಳು ==